Awareness program under ‘Jalashakthi Abhiyan,’ on water conservation
ಸುತ್ತೂರುಃ ದಿನಾಂಕ 23 ಜೂನ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಲಶಕ್ತಿ ಅಭಿಯಾನದಡಿ ರೈತರಿಗೆ ನೀರು ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ)ರಾದ ಶ್ರೀ ಜೆ.ಜಿ. ರಾಜಣ್ಣರವರು ರೈತರಿಗೆ ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಹಾಕುವುದರಿಂದಾಗುವ ಉಪಯೋಗಗಳು, ಮಣ್ಣು ಸವಕಳಿ ತಡೆಯುವ ಬಗ್ಗೆ ಮತ್ತು ವಿವಿಧ ತಳಿಗಳ ಹುಲ್ಲಿನ ಬೇರುಗಳನ್ನು ಬದುಗಳಲ್ಲಿ ನೆಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಮಣ್ಣು ಮತ್ತು ನೀರು ಸಂರಕ್ಷಣೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ಗಿಡಗಳ ಬೆಳವಣಿಗೆ ಉತ್ತಮವಾಗಿರುತ್ತದೆಂದು ತಿಳಿಸಿದರು.
ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಕ್ರಮಗಳನ್ನು ಕುರಿತಾದ ತಾಂತ್ರಿಕತೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಮಳೆಯಾಶ್ರಯ ಪ್ರದೇಶದಲ್ಲಿ ಇಳಿಜಾರಿಗೆ ಅಡ್ಡಲಾಗಿ ಉಳಿಮೆ ಮಾಡುವುದರಿಂದ ಮಣ್ಣು ಮತ್ತು ನೀರನ್ನು ಪೋಲಾಗದಂತೆ ತಡೆಯುವುದು ಹಾಗೂ ಇಳಿಜಾರಿರುವ ಪ್ರದೇಶಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದರಿಂದ ಮಳೆ ನೀರನ್ನು ಇಂಗುಗುಂಡಿಯಲ್ಲಿ ಇಂಗಿಸಬಹುದು. ಬದುಗಳ ಮೇಲೆ ಹುಲ್ಲು ಹಾಗೂ ಇತರೆ ಆಳವಾಗಿ ಬೇರು ಬಿಡುವ ಬೆಳೆಗಳನ್ನು ಬೆಳೆಯುವುದರಿಂದ ಮಳೆ ನೀರು ಹಾಗೂ ಮಣ್ಣು ಕೊಚ್ಚಿ ಹೋಗದಂತೆ ತಡೆಯಬಹುದೆಂದು ರೈತರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ 30 ರೈತರು ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ., ಗೃಹ ವಿಜ್ಞಾನಿಯಾದ ಶ‍್ರೀಮತಿ ನೇತ್ರಾವತಿ ಎತ್ತಿನಮನಿ, ಪಶು ವಿಜ್ಞಾನಿಯಾದ ಡಾ. ಯು.ಎಂ. ರಕ್ಷಿತ್ ರಾಜ್, ತೋಟಗಾರಿಕೆ ವಿಜ್ಞಾನಿಯಾದ ಡಾ. ಜಿ.ಎಂ. ವಿನಯ್ ರವರು ಭಾಗವಹಿಸಿದ್ದರು.