ನಾವು ಮಾಲೀಕರಲ್ಲ, ಅನುಭವಿಸುವವರು

ಪ್ರಪಂಚದಲ್ಲಿರುವ ಎಲ್ಲಾ ವಸ್ತುಗಳನ್ನು ನಾವು ಅನುಭವಿಸಬಹುದೇ ಹೊರತು ಮಾಲೀಕರಲ್ಲ ಎಂದು ಸುತ್ತೂರು ಶ್ರೀಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಶೇಷ ಆಂಗ್ಲಭಾಷಾ ಪ್ರವಚನದಲ್ಲಿ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳು ತಿಳಿಸಿದರು. ಜಗತ್ತಿನಲ್ಲಿ ಎಲ್ಲಾ ವಸ್ತುಗಳು ಚಲಿಸುತ್ತವೆ. ಅವುಗಳ ಚಲನೆ ದೇಶ ಮತ್ತು ಕಾಲದಲ್ಲಿವೆ. ಒಂದು ಕ್ಷಣವೂ ನಿಲ್ಲದೆ ಚಲಿಸುತ್ತಲಿವೆ ಮತ್ತು ಬದಲಾಗುತ್ತಲಿವೆ. ಇವು ಪ್ರಕೃದಿದತ್ತವಾದುದರಿಂದ ನಿಲ್ಲಿಸಲು ಸಾಧ್ಯವಿಲ್ಲ ಹಾಗೇ ಮನುಷ್ಯನ ದೇಹ ಮತ್ತು ಮನಸ್ಸುಗಳು ಕೂಡ ಬದಲಾಗುತ್ತಾ ಸಾಗುತ್ತಿವೆ, ಅಂತಿಮವಾಗಿ ನಶಿಸಿ ಹೋಗುತ್ತವೆ. ಇದೇ ಜಗದ ನಿಯಮ. ತಮ್ಮ ಹೃದಯ ಶ್ವಾಸಕೋಶÀ ನಿಲ್ಲಲು ಯಾರೂ ಬಯಸುವುದಿಲ್ಲ, ಅದರಂತೆ ಆಲೋಚನೆಗಳು ಮತ್ತು ಜ್ಞಾಪಕಶಕ್ತಿ ಕೂಡ. ಎಲ್ಲವೂ ನಿಂತಲ್ಲಿ ಜಗತ್ತು ಶೂನ್ಯವಾಗುವುದು, ಮಾನವನ ಬದುಕು ಬರಡಾಗುವುದು. ಎಲ್ಲವೂ ಚಲನಶೀಲವಾದುದರಿಂದ ಜಗತ್ತು ಸುಂದರವಿದೆ. ಬದುಕು ಸಂತೋಷದಾಯಕವಾಗಿದೆ. ಮಾನವ ಕೇವಲ ಹೊಂದಿಕೊಳ್ಳುವುದಕ್ಕೆ ಅವಶ್ಯವಾಗಿದೆ. ಜಗತ್ತನ್ನು ಬದಲು ಮಾಡಲು ಸಾಧ್ಯವಿಲ್ಲ; ರಾತ್ರಿಯೂ ಸುಂದರವಾಗಿದೆ, ಹಗಲೂ ಸಹ ಬಲು ಸುಂದರವೆ ಎಂದು ನಾವೇ ಬದಲಾದವೆಂದರೆ ಸಂತೋಷ. ಸ್ವರ್ಗ ನರಕಗಳನ್ನು ನಾವು ಸೃಷ್ಠಿಸಿಕೊಳ್ಳುತ್ತೇವೆ. ಕಾಳಿದಾಸ ಮತ್ತು ಕವಿ ವಡ್ರ್ಸ್‍ವರ್ಥ್‍ರವರು ಪ್ರಕೃತಿಯನ್ನು ರಮಣೀಯವಾಗಿ ಕಂಡು ವರ್ಣಿಸಿದ್ದಾರೆ. ಇದು ಅಂದು ಕಂಡ ಸುಂದರ ಜಗತ್ತು. ಹೀಗೆ ಕಾಣುತ್ತಾ ಸಾಗಿದರೆ ದೇವರನ್ನು ಕಾಣಲು ಸಾಧ್ಯವಿದೆ. ಸರ್ವಜ್ಞನಿಗೆ ಮನೆಯಿರಲಿಲ್ಲ, ಬಟ್ಟೆ ಇರಲಿಲ್ಲ, ಹಣವಿರಲಿಲ್ಲ ಆದರೂ ಆನಂದಕ್ಕೆ ಪಾರವೇ ಇರಲಿಲ್ಲ. ಜಗತ್ತಿನಲ್ಲಿ ಇರುವಂತೆ ಅನುಸರಿಸಿಕೊಂಡು ಹೋಗುವಲ್ಲಿ ಸಂತೋಷವಿದೆ. ಆದರೆ ಮಾನವ ತನ್ನ ಇಚ್ಛೆಯಂತೆ ಬದಲಾವಣೆ ಬಯಸುವಾಗ ಅದು ಆಗದಿದ್ದಲ್ಲಿ ಎಲ್ಲರನ್ನು ಶಪಿಸುವನು. ದೇವರನ್ನೂ ದೂರುವನು. ತಾನೇತಾನಾಗಿ ಜಗತ್ತಿನಲ್ಲಿ ಮರ ಗಿಡ, ಪ್ರಾಣಿ ಪಕ್ಷಿಗಳು ಪ್ರಕೃತಿಗೆ ಹೊಂದಿಕೊಂಡು ಸಂತೋಷವಾಗಿರುತ್ತವೆ. ಪಕ್ಷಿಗಳು ಹಾಡುತ್ತಾ ಜೀವನ ಸಾಗಿಸುತ್ತವೆ. ಮರ-ಗಿಡ, ಹೂ-ಬಳ್ಳಿಗಳೂ ಅರಳುತ್ತವೆ, ಹೊಂದಿಕೊಂಡು ಹೋದರೆ ಮಾನವನ ಮನಸ್ಸು ಅರಳಿ ಸ್ವರ್ಗವಾಗುತ್ತದೆ. ಈಶೋಪನಿಷತ್ತಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಾ 100 ವರ್ಷ ಬದುಕಲು ಹೇಳುತ್ತದೆ. ಜಗತ್ತನ್ನು ಸ್ವೀಕರಿಸಿ ಬದುಕಬೇಕು. ದ್ವೇಷ ಬೇಡ ಎಂಬುದಾಗಿ ಹೇಳುತ್ತದೆ. ಶ್ರಮಕ್ಕೆ ಪ್ರತಿಫಲದ ಚಿಂತೆ ಬೇಡ. ಆಸೆಯಿಂದ ನಿರೀಕ್ಷಿಸುವುದು ಬೇಡ. ಸಂತೋಷದ ಅನುಭವಕ್ಕಾಗಿ ಕೆಲಸ ಮಾಡಲು ತಿಳಿಸುತ್ತದೆ. ಪ್ರಕೃತಿಯನ್ನು ಅನುಭವಿಸಿ ಸಂತೋಷಪಡಬೇಕು ವಿನಃ ಮಾಲೀಕನಾಗಲು ಪ್ರಯತ್ನಿಸಬಾರದು ಎಂದು ನುಡಿದರು.

ಪ್ರವಚನದಲ್ಲಿ ಮೈಸೂರು, ಸುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜಿಜ್ಞಾಸುಗಳು ಆಗಮಿಸಿ ಇದರ ಪ್ರಯೋಜನ ಪಡೆದರು. ಮುಂದಿನ ವಿಶೇಷ ಉಪನ್ಯಾಸವು ಮೇ 05 2019 ರಂದು ಜರುಗಲಿದೆ. ಆಸಕ್ತರು ಇದರ ಪ್ರಯೋಜನ ಪಡೆಯಬಹುದು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಇದೇ 28 ರಂದು ಪ್ರವಚನ ನೀಡುತ್ತಿರುವ ಪೂಜ್ಯಶ್ರೀ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಚಿತ್ರದಲ್ಲಿ ಶ್ರದ್ಧಾಭಕ್ತಿಯಿಂದ ಆಲಿಸುತ್ತಿರುವ ಭಕ್ತಾಧಿಗಳನ್ನು ಕಾಣಬಹುದು.

2019-04-30T05:07:36+00:00